ನೀರು ಅಥವಾ ಜಲ ಸಕಲ ಜೀವರಾಶಿಗಳ ಜೀವಕ್ಕೆ ಮೂಲವಾಗಿದೆ. ಇಂತಹ ಪವಿತ್ರ ಜನ ನಮಗೆ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೂ ಸಿಗಬೇಕು ಎಂಬ ಉದ್ದೇಶದಿಂದ ವಿಶ್ವದಲ್ಲೆಡೆ ಮಾರ್ಚ್ 22 ನ್ನು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಒಂದಿಷ್ಟು ಮಾಹಿತಿ.
ಏನಿದು ವಿಶ್ವ ಜಲ ದಿನ
ನೀರು ಇದ್ದ ಕಡೆ ಜೀವಸಂಕುಲವಿರುತ್ತದೆ, ನೀರಿಲ್ಲದ ಕಡೆ ಬರಡು ಮನೆ ಮಾಡಿರುತ್ತದೆ. ಇಂತಹ ಪವಿತ್ರ ಜಲ ನಮಗೆ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗಳಿಗೂ ಸಿಗಬೇಕು, ಈ ನೀರು ಸ್ವಚ್ಛ ಮತ್ತು ಸುಂದರವಾಗಿರಬೇಕು ಎಂಬುದೇ ಈಗಿನ ಪ್ರಮುಖ ಕಳಕಳಿ ಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಇದರ ಒಂದು ಭಾಗವೇ ವಿಶ್ವ ಜಲ ದಿನ. ವಿಶ್ವದೆಲ್ಲೆಡೆ ಮಾರ್ಚ್ 22 ನ್ನು ವಿಶ್ವ ಜಲ ದಿನ ಅಥವಾ ವರ್ಲ್ಡ್ ವಾಟರ್ ಡೇ ಎಂದು ಆಚರಿಸಲಾಗುತ್ತದೆ.
ಶುರುವಾಗಿದ್ದು ಯಾವಾಗ ?
ರಿಯೋ ಡಿ ಜನೈರೊದಲ್ಲಿ 1992 ರಲ್ಲಿ ನಡೆದ ವಿಶ್ವ ಸಂಸ್ಥೆಯ ಹವಾಮಾನ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಜಲ ದಿನ ಆಚರಿಸುವ ಕುರಿತು ಪ್ರಸ್ತಾವನೆಯಾದ ಬಳಿಕ 1993 ಮಾರ್ಚ್ 22ರಂದು ಮೊದಲ ಜಲ ದಿನ ಆಚರಿಸಲಾಯಿತು.
ಉದ್ದೇಶ:
ನಮ್ಮ ಇಡೀ ಭೂಮಿ ನೀರಿನಿಂದಾವೃತವಾಗಿದೆ ಎಂಬುದೇನೋ ನಿಜ ಆದರೆ ವಿಪರ್ಯಾಸವೆಂದರೆ ಜಗತ್ತಿನ ಸುಮಾರು 783 ದಶಲಕ್ಷದಷ್ಟು ಜನರಿಗೆ ಈಗಲೂ ಕುಡಿಯಲು ನೀರು ಸಿಗುತ್ತಿಲ್ಲ. ಕೇವಲ 2.5 ದಶಲಕ್ಷ ಜನರಿಗೆ ಮಾತ್ರ ನೀರಿನ ಲಭ್ಯತೆ ಇದೆ. ಅಲ್ಲದೆ ಈಗಿನ ಕೆಲವು ಅಭಿವೃದ್ಧಿ ಕಾಮಗಾರಿ ಮತ್ತು ಬೃಹತ್ ಕೈಗಾರಿಕೆಗಳಿಂದ ನೀರು ಕಲುಷಿತವಾಗಿದೆ. ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ನೈರ್ಮಲ್ಯ ಕಾರ್ಯಗಳಿಗಂತೂ ನೀರೇ ಇಲ್ಲದಿರುವ ಸ್ಥಿತಿ ನಿರ್ಮಾಣವಾಗಿದೆ. ನೀರು ತುಂಬಾ ಅಮೂಲ್ಯವಾದದ್ದು ನೀರಿನ ಮೂಲ ಎಂದು ಬತ್ತಬಾರದು, ವಿಶ್ವದ ಎಲ್ಲಾ ಜನರಿಗೂ ಸಿಗುವಂತಾಗಬೇಕು ಎಂಬುದೇ ಸದಾಶಯವಾಗಿದೆ.
ರಾಷ್ಟ್ರೀಯ ಜಲಜೀವನ ಮಿಷನ್
ಕೇಂದ್ರ ಸರ್ಕಾರವೂ 2019 ರ ಆಗಸ್ಟ್ 15ರಂದು ರಾಷ್ಟ್ರೀಯ ಜಲಜೀವನ ಮಿಷನ್ ಆರಂಭಿಸಿದೆ. 2024 ರ ವೇಳೆಗೆ ಗ್ರಾಮೀಣ ಭಾರತದ ಎಲ್ಲ ಮನೆಗಳಿಗೆ ನಲ್ಲಿಯ ಮುಖಾಂತರ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆ ಇದು. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸುತ್ತಿದೆ. ಯೋಜನೆಗೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತಿದ್ದು ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ "ಮನೆ ಮನೆಗೆ ಗಂಗೆ" ಯೋಜನೆ ಅನುಷ್ಠಾನಗೊಳಿಸುತ್ತಿದೆ.
ಈ ವರ್ಷದ ಥೀಮ್:
ವಿಶ್ವಸಂಸ್ಥೆಯು ಪ್ರತಿವರ್ಷ ಜಲ ದಿನಕ್ಕೆ ಒಂದು ಘೋಷ ವಾಕ್ಯ ನೀಡುತ್ತದೆ. ಈ ವರ್ಷದ ಥೀಮ್ Groundwater: Making The Invisible Visible. ಅಂದರೆ ಅಂತರ್ಜಲ : ಅದೃಶ್ಯವಾಗಿ ರುವುದನ್ನು ಗೋಚರಿಸುವಂತೆ ಮಾಡೋಣ ಎಂದು ಇದನ್ನು ಅರ್ಥ ಮಾಡಿಕೊಳ್ಳಬಹುದು.