ಗುರು ಬ್ರಹ್ಮ ಗುರು ವಿಷ್ಣು
ಗುರು ದೆವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ಆತ್ಮೀಯರೇ ಈ ಸಾಲಿನ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಮ್ಮ ತಾಲೂಕಿನ ಅತಿ ಕ್ರಿಯಾಶೀಲ ವಿಜ್ಞಾನ ಶಿಕ್ಷಕರಾದ ಶ್ರೀ ರಾಜೇಂದ್ರಕುಮಾರ್ ತೆಲಸಂಗ ಸರಕಾರಿ ಪ್ರೌಢ ಶಾಲೆ ನಾಗರಾಳ ಸರ್ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ತಿಳಿಸುತ್ತಾ,
ಸ್ನೇಹಿತರೆ, ನನ್ನ ಎಲ್ಲ ಶಿಕ್ಷಕ ಮಿತ್ರರೇ, ವಿದ್ಯಾರ್ಥಿ ಮಿತ್ರರೇ,ಹಿರಿಯರೇ ತಮ್ಮಗೆಲ್ಲರಿಗೂ ತಿಳಿದಂತೆ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇವರಿಗೆ ಶಿಕ್ಷಕರ ಬಗ್ಗೆ ತುಂಬಾ ಗೌರವ ಇತ್ತು. ಅವರು ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲು ತಿಳಿಸಿದ್ದರು.
ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು. ಆದ್ದರಿಂದ ಅವರು ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೂ ಮೂಡಿಸಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮ ದಿನವಾದ ಸೆಪ್ಟೆಂಬರ್ 5 ನೇ ತಾರೀಖನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ.
ಇನ್ನೂ ಮಹತ್ವದ ವಿಷಯ ಎಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತ ದೇಶದ ಎರಡನೇ ರಾಷ್ಟ್ರಪತಿಯಾಗಿ ಹಾಗೂ ದೇಶದ ಮೊದಲ ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದವರು
ಸ್ನೇಹಿತರೆ ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮಹತ್ವವಾದದ್ದು.
ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ. ತಮ್ಮ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೆಂಬಲವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶದ ಉತ್ತಮ ಪ್ರಜೆ ಆಗಲು ಆತ್ಮ ವಿಶ್ವಾಸವನ್ನು ತುಂಬುತ್ತಾರೆ. ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವವರು ಶಿಕ್ಷಕರು. ಅಂತಹ ಉತ್ತಮ ಶಿಕ್ಷಕ ವೃತ್ತಿಯನ್ನು ನಾವೆಲ್ಲರೂ ಪಡೆದಿದ್ದೇವೆ.
"The good teacher explains. The superior teacher demonstrates. The great teacher inspires”.
“What the teacher is, is more important than what he teaches”
“Education is the most powerful weapon which you can use to change the world”
“ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು”
ಶಿಕ್ಷಕ' ಅನ್ನೋದು ಕೇವಲ ಬರೀ 3 ಅಕ್ಷರಗಳ ಪದವಲ್ಲ. ಅದು ಇಡೀ ಜಗತ್ತನ್ನೇ ಬೆಳಗುವ ಪದ. ಬೆಳಗಿಸುವ ಪದ.
" ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು. ಜೀವನ ಸಮಯದ ಸದುಪಯೋಗ ಕಲಿಸಿದರೆ, ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು ಕೌಶಲ್ಯಗಳೊಂದಿಗೆ ಮತ್ತು ಅನುಭವಗಳೊಂದಿಗೆ ತಿಳಿಸುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವ ಹೊಳೆಯಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ." ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಅವರ ಮಾತನ್ನು ಸ್ಮರಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಮತ್ತೊಮ್ಮೆ ಭಾರತಾಂಬೆಯ ಮಡಿಲಿನ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ..... ನನ್ನ ಮಾತನ್ನು ಮುಗಿಸುತ್ತಿದ್ದೇನೆ.
ಜೈ ಹಿಂದ್, ಜೈ ಭಾರತಾಂಬೆ, ವಂದೇ ಮಾತರಂ.