ಭಾನುವಾರ, ಆಗಸ್ಟ್ 4, 2024

ಕಗ್ಗ

 ಜೀವ ಜಡರೂಪ ಪ್ರಪಂಚವನದಾವುದೋ |

ಆವರಿಸಿಕೊಂಡುಮೊಳನೆರೆದುಮಿಹುದಂತೆ ||

ಭಾವಕೊಳಪಡದಂತೆ ಅಳತೆಗಳವಡದಂತೆ |

ಆ ವಿಶೇಷಕೆ ಮಣಿಯೋ- ಮಂಕುತಿಮ್ಮ ||


ಪ್ರಪಂಚವನದಾವುದೋ=ಪ್ರಪಂಚವನ್+ಅದು+ಆವುದೋ,

ಆವರಿಸಿಕೊಂಡುಮೊಳನೆರೆದುಮಿಹುದಂತೆ=ಆವರಿಸಿಕೊಂಡುಂ+ಒಳನೆರದುಂ+ಇಹುದಂತೆ,

ಭಾವಕೊಳಪಡದಂತೆ=ಭಾವಕೆ+ಒಳಪಡದಂತೆ, ಅಳತೆಗಳವಡದಂತೆ=ಅಳತೆಗೆ+ಅಳವಡದಂತೆ. ಜೀವ=ಚೇತನ, ಜಡ=ಸ್ಥಾವರ ಅಥವಾ ಚಲನೆಯಿಲ್ಲದ್ದು, ಒಳನೆರದು=ಒಳಗೆಲ್ಲಾ ಆವರಿಸಿಕೊಂಡು,

ಅಳವಡದಂತೆ=ಅಳತೆಗೆ ಸಿಗದಂತೆ.


ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ, ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ, ಇವೆರಡರಲ್ಲೂ ಆವರಿಸಿಕೊಂಡಿರುವ, ಭಾವದಿಂದ ಊಹಿಸಲಸಾಧ್ಯವಾದ, ಅಳತೆಗೆ ಸಿಗದ ವ್ಯಾಪಕತ್ವವು ಹೊಂದಿರುವ ಆ ವಿಶೇಷಕೆ, ಪರಮಾತ್ಮನಿಗೆ ನಮಿಸೋ, ಮಣಿಯೋ, ನಮಸ್ಕರಿಸೋ ಮಂಕುತಿಮ್ಮ ಎಂದು ಹೇಳುತ್ತಾರೆ ಡಿ.ವಿ.ಜಿ.