ಶನಿವಾರ, ಸೆಪ್ಟೆಂಬರ್ 4, 2021

ಶಿಕ್ಷಕರ ದಿನಾಚರಣೆಯ ಕುರಿತು



 ಗುರು ಬ್ರಹ್ಮ ಗುರು ವಿಷ್ಣು 

ಗುರು ದೆವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರುವೇ ನಮಃ

       ಸ್ನೇಹಿತರೆ, ನನ್ನ ಎಲ್ಲ ಶಿಕ್ಷಕ ಮಿತ್ರರೇ, ವಿದ್ಯಾರ್ಥಿ ಮಿತ್ರರೇ,ಹಿರಿಯರೇ ತಮ್ಮಗೆಲ್ಲರಿಗೂ ತಿಳಿದಂತೆ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇವರಿಗೆ ಶಿಕ್ಷಕರ ಬಗ್ಗೆ ತುಂಬಾ ಗೌರವ ಇತ್ತು. ಅವರು ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲು ತಿಳಿಸಿದ್ದರು.

      ನಮ್ಮ ದೇಶದ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ರವರು. ಆದ್ದರಿಂದ ಅವರು ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೂ ಮೂಡಿಸಿದ್ದಾರೆ. ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮ ದಿನವಾದ ಸೆಪ್ಟೆಂಬರ್ 5 ನೇ ತಾರೀಖನ್ನು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ.

       ಇನ್ನೂ ಮಹತ್ವದ ವಿಷಯ ಎಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಭಾರತ ದೇಶದ ಎರಡನೇ ರಾಷ್ಟ್ರಪತಿಯಾಗಿ ಹಾಗೂ ದೇಶದ ಮೊದಲ ಉಪರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದವರು

        ಸ್ನೇಹಿತರೆ ಶಿಕ್ಷಕರು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸಾಮಾಜಿಕ ಚಿಂತನೆ, ಕಳಕಳಿ ಹೊಂದಿರುವವರೇ ಉತ್ತಮ ಶಿಕ್ಷಕರು. ಸದೃಢ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅತೀ ಮಹತ್ವವಾದದ್ದು.

        ಉತ್ತಮ ಶಿಕ್ಷಕರು ಕೇವಲ ಪುಸ್ತಕದಲ್ಲಿನ ಪಾಠವನ್ನು ಮಾತ್ರ ಹೇಳುವುದಿಲ್ಲ. ತಮ್ಮ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೆಂಬಲವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ವಿದ್ಯಾರ್ಥಿಗಳಲ್ಲಿ ದೇಶದ ಉತ್ತಮ ಪ್ರಜೆ ಆಗಲು ಆತ್ಮ ವಿಶ್ವಾಸವನ್ನು ತುಂಬುತ್ತಾರೆ. ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವವರು ಶಿಕ್ಷಕರು. ಅಂತಹ ಉತ್ತಮ ಶಿಕ್ಷಕ ವೃತ್ತಿಯನ್ನು ನಾವೆಲ್ಲರೂ ಪಡೆದಿದ್ದೇವೆ.

        ಸ್ನೇಹಿತರೇ 2020 ರ ಮಾರ್ಚ್‌ನಿಂದಲೂ ಸಹ ಕೊರೊನಾ ಎಂಬ ಮಹಾಮಾರಿ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದೆ. ಇಂತಹ ಪರಿಸ್ಥಿತಿಯಲ್ಲೂ ಸಹ ನಮ್ಮ ಶಿಕ್ಷಕರು ತಮ್ಮ ಪ್ರಾಣದ ಹಂಗು ತೊರೆದು ಕಲಿಸಲು ಆಸಕ್ತಿ ತೋರಿದ್ದಾರೆ. ಇಂತಹ ಶಿಕ್ಷಕರನ್ನು ಪಡೆದ ನಾವೇ ಭಾಗ್ಯವಂತರು.

      "The good teacher explains. The superior teacher demonstrates. The great teacher inspires”.

      “What the teacher is, is more important than what he teaches”

      “Education is the most powerful weapon which you can use to change the world”

     “ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು”

       ಶಿಕ್ಷಕ' ಅನ್ನೋದು ಕೇವಲ ಬರೀ 3 ಅಕ್ಷರಗಳ ಪದವಲ್ಲ. ಅದು ಇಡೀ ಜಗತ್ತನ್ನೇ ಬೆಳಗುವ ಪದ. ಬೆಳಗಿಸುವ ಪದ.

      " ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು. ಜೀವನ ಸಮಯದ ಸದುಪಯೋಗ ಕಲಿಸಿದರೆ, ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು ಕೌಶಲ್ಯಗಳೊಂದಿಗೆ ಮತ್ತು ಅನುಭವಗಳೊಂದಿಗೆ ತಿಳಿಸುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವ ಹೊಳೆಯಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ." ಎಂದು ಡಾ. ಎಪಿಜೆ ಅಬ್ದುಲ್‌ ಕಲಾಂ ಅವರು ಹೇಳಿದ್ದಾರೆ. ಅವರ ಮಾತನ್ನು ಸ್ಮರಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

       ಮತ್ತೊಮ್ಮೆ ಭಾರತಾಂಬೆಯ ಮಡಿಲಿನ ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಹೇಳುತ್ತಾ..... ನನ್ನ ಮಾತನ್ನು ಮುಗಿಸುತ್ತಿದ್ದೇನೆ.

    ಜೈ ಹಿಂದ್, ಜೈ ಭಾರತಾಂಬೆ, ವಂದೇ ಮಾತರಂ.






ಗುರುವಾರ, ಆಗಸ್ಟ್ 12, 2021

ನಾಗ ಪಂಚಮಿ



 ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

ಪುರಾಣ

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.

ಮಹಾತ್ಮೆ

ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ಎತ್ತಿದಾಗ, ಶೇಷನು ಲಕ್ಷ್ಮಣನ ಅವತಾರವನ್ನು ಎತ್ತಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.

  ಒಟ್ಟಾರೆ ನಾಗರಪಂಚಮಿ ನಾಡಿನಲ್ಲಿ ದೊಡ್ಡ ಹಬ್ಬವಾಗಿದೆ. ಹಬ್ಬದ ಹೆಸರಲ್ಲಿ ನಿಜವಾದ ಹಾವುಗಳಿಗೆ ಹಾಲು ಎರೆಯಲು ಹೋಗಿ ಅಪಾಯ ಎಳೆದುಕೊಳ್ಳದಿರುವುದು ಒಳಿತು.

ಸೋಮವಾರ, ಜುಲೈ 19, 2021

ಜೀವನ

 ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ
ತೊದಲ ನುಡಿಯ ತಪ್ಪುಗಳೇ ಜೀವನ
ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ
ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ
ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ
ಗುರಿಯರಿತು ಸಾಧಿಸುವುದೇ ಜೀವನ
ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ
ತನು ಮನವ ಶುದ್ಧಿಕರಣವೇ ಜೀವನ
ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ
ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ
ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ
ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ
ನಿಸರ್ಗ ನಿಯಮಗಳ ಅರಿಯುವುದೇ ಜೀವನ
ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ
ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ.


ನನ್ನಾಸೆ.

ಜಗತ್ತನೇ ಬೆಳಗುವ ಸೂರ್ಯನ ಹಾಗೆ ಪ್ರಜ್ವಲಿಸುವಾಸೆ,
ಗ್ರಹ ತಾರೆಯರ ಜೊತೆ ಆಟವಾಡುವಾಸೆ,
ತಿಂಗಳನ ಬೆಳಕಲ್ಲಿ ಮಿಯುವಾಸೆ,
ಹಚ್ಚ ಹಸುರಿನ ಮರದಲ್ಲಿ ಚಿಗುರುವಾಸೆ,
ಹಕ್ಕಿಗಳ ಕೊರಳ ಸ್ವರವಾಗುವಾಸೆ,
ಜೇನಗೂಡಲ್ಲಿ ಬೆರೆತು ಒಗ್ಗಟ್ಟು ಪ್ರದರ್ಶಿಸುವಾಸೆ,
ದುಂಬಿಗೆ ಆಹಾರ ನೀಡುವ ಹೂವಾಗುವಾಸೆ,

ಅನ್ನದಾತನ ಬಾಳ ಬೆಳಗುವ ವರ್ಷವಾಗುವಾಸೆ,
ಹಣತೆಯ ತೈಲದಲ್ಲಿ ಬೆರೆತು ಬೆಳಕಾಗುವಾಸೆ,
ಕೆಟ್ಟವರ ಹೃದಯದಲ್ಲಿ ಕುಳಿತು ಬದಲಾಯಿಸುವಾಸೆ,
ಬಸವನುದಿಸಲಿ ಎಂದು ತಪಗೈಯುವಾಸೆ,
ಬುದ್ಧ, ಗಾಂಧೀಯರ ಶಾಂತಿ ಮಂತ್ರವ ಪಠಿಸುವಾಸೆ,

ಭಾರತಾಂಬೆಯನ್ನು ನಭದೆತ್ತರಕ್ಕೆ ಬೆಳಗಿಸುವಾಸೆ........
ಈ ಆಸೆಯ ಈಡೆರಿಸುವಾಸೆಗೆ ಬಲ ನೀಡುವರಾರು? ಯಾರು?

ಯಾರು? ........